ಏಷ್ಯ ಮೈನರ್‍ನ ಪಶ್ಚಿಮದಲ್ಲಿದ್ದ ಒಂದು ಪುರಾತನ ದೇಶ. ಅನತೋಲಿಯದ ಪಶ್ಚಿಮದಲ್ಲಿ ಹರ್ಮಸ್ ಮತ್ತು ಕೈಸ್ಟರ್ ನದಿ ಕಣಿವೆ ಪ್ರದೇಶದಲ್ಲಿ ಗ್ರೀಸ್ ಮತ್ತು ಏಜಿಯನ್ ಸಮುದ್ರಕ್ಕೆ ಪೂರ್ವದಲ್ಲಿದ್ದ ಈ ದೇಶದ ರಾಜಧಾನಿ ಸಾರ್ಡಿಸ್ ಆಗಿತ್ತು. ಈ ಪ್ರದೇಶದ ಇತಿಹಾಸ ಅತ್ಯಂತ ಪುರಾತನವಾದುದು. ಕ್ರಿ.ಪೂ. 8ನೆಯ ಶತಮಾನದಲ್ಲಿಯೇ ಹೋಮರ್ ಈ ಪ್ರದೇಶವನ್ನು ‘ಮಾಯಿಓನಿಯಾ’ ಎಂದು ಕರೆದಿರುವನಂತೆ. ಈ ಪ್ರದೇಶ ಹೆಚ್ಚುಫಲವತ್ತಾದ ಮಣ್ಣಿಗೆ ಮತ್ತು ಅಲ್ಲಿಯ ಚಿನ್ನ ಮತ್ತು ಬೆಳ್ಳಿಯ ನಿಕ್ಷೇಪಗಳಿಗೆ ಪ್ರಸಿದ್ಧವಾಗಿತ್ತು. ಲಿಡಿಯ ಕ್ರಿ.ಪೂ. 685ರಲ್ಲಿ ಆರಂಭಗೊಂಡ ಮರ್ನದಾಯಿ ವಂಶದ ಆಡಳಿತದ ಅವಧಿಯಲ್ಲಿ ಪ್ರಾಮುಖ್ಯ ಪಡೆದುಕೊಂಡಿತು. ಕ್ರಿ.ಪೂ. 6ನೆಯ ಶತಮಾನದಲ್ಲಿ ಲಿಡಿಯ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಂಡು ಚಕ್ರಾಧಿಪತ್ಯವಾಯಿತು. ಕ್ರೊಯೇಸಸ್ ರಾಜನ ಅವಧಿಯಲ್ಲಿ ಇದು ಉತ್ತುಂಗಕ್ಕೇರಿತ್ತು. ಅನಂತರದ ಅವಧಿಯಲ್ಲಿ ಲಿಡಿಯ ತನ್ನ ಪ್ರಾಮುಖ್ಯ ಕಳೆದುಕೊಂಡಿತು. ಪರ್ಷಿಯದ ರಾಜ ಸೈರಸ್ ಕ್ರಿ.ಪೂ.546ರಲ್ಲಿ ಸಾರ್ಡಿಸ್ ನಗರವನ್ನು ಗೆದ್ದು ಲಿಡಿಯವನ್ನು ತನ್ನ ಚಕ್ರಾಧಿಪತ್ಯದಲ್ಲಿ ವಿಲೀನಗೊಳಿಸಿದ. ಚಿನ್ನ ಬೆಳ್ಳಿಯ ನಾಣ್ಯಗಳನ್ನು ತಯಾರಿಸಿದವರಲ್ಲಿ ಲಿಡಿಯನ್ನರು ಮೊದಲಿಗರೆಂದು ತಿಳಿಯಲಾಗಿದೆ. ಇವರು ತಯಾರಿಸಿದ ನಾಣ್ಯಗಳನ್ನು ಕಂಡ ರೋಮನ್ನರು ಅದನ್ನು ತಮ್ಮದನ್ನಾಗಿಸಿಕೊಂಡು ತಮ್ಮ ರಾಜ್ಯದಲ್ಲೂ ಜಾರಿಗೆ ತಂದರು. 

	ಮ್ಯಾಸಿಡೋನಿಯದ ಮೂರನೆಯ ಅಲೆಕ್ಸಾಂಡರ್ ಪರ್ಷಿಯನ್ನರನ್ನು ಸೋಲಿಸಿ, ಗ್ರೀಕ್ ಮ್ಯಾಸಿಡೋನಿಯದಲ್ಲಿ ಲಿಡಿಯವನ್ನು ಸೇರಿಸಿದ. ಕ್ರಮೇಣ ಲಿಡಿಯನ್ನರು ಗ್ರೀಕ್ ಭಾಷೆ ಮತ್ತು ಸಂಸ್ಕೃತಿಯಲ್ಲಿ ವಿಲೀನಹೊಂದಿದರು. ಮೊದಲನೆಯ ಶತಮಾನದಲ್ಲಿ ಸ್ಟ್ರಾಬೋ ಲಿಡಿಯನ್ನರ ವಂಶಾವಳಿಯನ್ನು ಕುರಿತು ಅಲ್ಲಲ್ಲಿ ತಿಳಿಸಿರುವನಾದರೂ ಈ ಜನರ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ತಿಳಿದುಬಂದಿಲ್ಲ. ಲಿಡಿಯನ್ ಭಾಷೆ ಅನತೋಲಿಯದ ಪುರಾತನ ಭಾಷೆಗಳಾದ ಹಿಟ್ಟೈಟ್, ಲೂವಿಯನ್ ಮೊದಲಾದ ಭಾಷೆಗಳಿಂದ ಉಗಮ ಹೊಂದಿರುವ ಹೊಸ ಅನತೋಲಿಯ ಭಾಷೆಗಳ ಗುಂಪಿಗೆ ಸೇರಿದೆ ಎನ್ನುತ್ತಾರೆ.
	
(ಆರ್‍ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ